ನಮ್ಮ ಕುರಿತು
ಕಲರ್ಸ್ ಕನ್ನಡ: ರಂಜನೆ ಮತ್ತು ಸಂಸ್ಕೃತಿಗಳ ಸಂಗಮ
ಬದಲಾಗುತ್ತಲೇ ಇರುವ ಭಾರತದ ಟೆಲಿವಿಷನ್ ನಕಾಶೆಯಲ್ಲಿ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಹೆಮ್ಮೆಯ ಕಾಣಿಕೆಯಾದ
‘ಕಲರ್ಸ್ ಕನ್ನಡ’ ಎದ್ದು ತೋರುವಂತೆ ಬೆಳೆದು ನಿಂತಿದೆ. ಕನ್ನಡಿಗರ ವೈವಿಧ್ಯಮಯ ಅಭಿರುಚಿಗೆ ತಕ್ಕುದಾದ ಮನರಂಜನೆಯ ತಿನಿಸುಗಳನ್ನು ಉಣಬಡಿಸುತ್ತಾ ಅದು ಎಲ್ಲರ ಮನ ಗೆದ್ದಿದೆ. ಕರ್ನಾಟಕದ ಸಂಸ್ಕೃತಿಯೊಂದಿಗೆ ಇನ್ನಿಲ್ಲದಂತೆ ಬೆರೆತುಹೋಗುವ ಶಕ್ತಿಯ ಜೊತೆ ಸದಾ ಹೊಸತನಕ್ಕೆ ಹವಣಿಸುವ ಕಣ್ಣು ಹೊಂದಿರುವ
‘ಕಲರ್ಸ್ ಕನ್ನಡ’ ವಾಹಿನಿಯು ಈ ನಾಡಿನ ಟೀವಿ ಮನರಂಜನೆಯ ಅವಿಭಾಜ್ಯ ಅಂಗವಾಗಿದೆ.
ETV ಆಗಿದ್ದ ಚಾನೆಲ್, 2012ರಲ್ಲಿ ‘ಕಲರ್ಸ್ ಕನ್ನಡ’ವಾದ ನಂತರ ಹೆಸರಿನೊಂದಿಗೆ ತನ್ನ ಕಾರ್ಯಕ್ರಮಗಳ ಸ್ವರೂಪವನ್ನೂ ಬದಲಿಸಿಕೊಳ್ಳುತ್ತಾ ಸಾಗಿತು. ಹೊಸ ಹೆಸರಿನೊಂದಿಗೆ ಹೊಸ ಗುರುತನ್ನೂ ಸಂಪಾದಿಸಿಕೊಂಡಿತು. ಈ ಮಣ್ಣಿನ ಗುಣವನ್ನು ಬಿಟ್ಟುಕೊಡದೇ, ಜಾಗತಿಕ ವೇಗದ ಗತಿಗೂ ಹೊಂದಿಕೊಳ್ಳುತ್ತಾ ತನ್ನದೇ ಆದ ಹೊಸಬಣ್ಣವೊಂದನ್ನು ಕಲರ್ಸ್ ಕನ್ನಡ ಪಡೆದುಕೊಂಡಿತು. ಕನ್ನಡಿಗರ ಹೃದಯಗಳಲ್ಲಿ ಮನೆ ಮಾಡಿತು. ಜನರ ಅಭಿರುಚಿ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಸಹಜವಾಗಿ ರೂಪಾಂತರಗೊಳ್ಳುವ ಸಾಮರ್ಥ್ಯವೇ ಕಲರ್ಸ್ ಕನ್ನಡದ ಹೆಚ್ಚುಗಾರಿಕೆ. ಕರ್ನಾಟಕದ ವಿವಿಧ ಭಾಗದ ಜನರ ಭಾವನೆಗಳನ್ನು ಪ್ರತಿಬಿಂಬಿಸುವಂಥ ಕಾರ್ಯಕ್ರಮಗಳನ್ನು ಅದು ರೂಪಿಸಿತು. ಅದರ ಮನರಂಜನೆಯ ಬುಟ್ಟಿಯಲ್ಲಿ ಎಲ್ಲ ವಯಸ್ಸಿನ, ಎಲ್ಲ ಭಾಗದ, ಎಲ್ಲ ಹಿನ್ನೆಲೆಯ ಜನರಿಗೂ ಇಷ್ಟವಾಗುವ ಏನೋ ಒಂದು ಸಿಕ್ಕೇ ಸಿಗುತ್ತದೆ.
ಮನಕಲಕುವ ಧಾರಾವಾಹಿಗಳಿರಲಿ, ಮಜಾ ನೀಡುವ ರಿಯಾಲಿಟಿ ಶೋಗಳಿರಲಿ, ಸಂಯಮದ ಗಡಿ ಮೀರದೆ ರಂಜಿಸುವುದರಲ್ಲಿ ಕಲರ್ಸ್ ಕನ್ನಡ ಸದಾ ಮುಂದು. ಅದಕ್ಕೇ ಇವತ್ತು ‘ಕಲರ್ಸ್ ಕನ್ನಡ’ ಎನ್ನುವುದು ಬರೀ ಒಂದು ಟೀವಿ ವಾಹಿನಿಯಲ್ಲ- ಅದು ಮನೆಮನೆಯ ಸಾಂಸ್ಕೃತಿಕ ಸಂಗಾತಿ. ಕಳೆದ ಹನ್ನೆರಡು ವರ್ಷಗಳಲ್ಲಿ ಬದಲಾದ ಟೀವಿ ಮನರಂಜನೆಗೆ ಹೊಂದಿಕೊಳ್ಳುವುದಷ್ಟೇ ಅಲ್ಲದೆ ಆ ಬದಲಾವಣೆ ಹೇಗಿರಬೇಕು ಎಂಬುದನ್ನು ರೂಪಿಸಿದ್ದು ಕಲರ್ಸ್ ಕನ್ನಡದ ಹೆಮ್ಮೆ. ಪ್ರಾದೇಶಿಕ ಸತ್ವ-ತತ್ವಗಳಿಗೆ ಬದ್ಧವಾಗಿ, ಕನ್ನಡಿಗರಿಗೆ ತಮ್ಮದೇ ಅನ್ನಿಸುವಂಥ ಒಂದು ಚೆಂದದ ಟೀವಿ ಚಾನಲ್ ಅನ್ನು ಕೊಟ್ಟಿರುವ ಕಲರ್ಸ್ ಕನ್ನಡ ಇವತ್ತು ಬರೀ ಮನರಂಜನೆಯಾಗಿ ಉಳಿದಿಲ್ಲ; ಕರ್ನಾಟಕದ ಸಾಂಸ್ಕೃತಿಕ ಭಾವಚಿತ್ರದ ಅಚ್ಚಳಿಯದ ಭಾಗವೇ ಆಗಿದೆ.